ಸಾವರಕರ, ವಿನಾಯಕ ದಾಮೋದರ
	1883-1966. ಮಹಾನ್‍ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಕವಿ, ಖ್ಯಾತ ಇತಿಹಾಸಕಾರ, ಹಿಂದುತ್ವದ ಪ್ರಭಾವಿ ವಕ್ತಾರ. ಇವನು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ಭಗೂರ್ ಎಂಬಲ್ಲಿ ಜನಿಸಿದ. ತಂದೆ ದಾಮೋದರ ಪಂತ, ತಾಯಿ ರಾಧಾಬಾಯಿ, ಇವರದು ಇನಾಮ್‍ದಾರ್ ಮನೆತನ. ಇವನು ಬಾಲ್ಯದಲ್ಲಿಯೆ ರಾಮಾಯಣ, ಮಹಾಭಾರತ ಮತ್ತು ಮರಾಠ ಇತಿಹಾಸಗಳಿಂದ ಸ್ಫೂರ್ತಿಗೊಂಡು ಉಗ್ರರಾಷ್ಟ್ರವಾದಿಯಾದ ಲೋಕಮಾನ್ಯ ಬಾಳ ಗಂಗಾಧರ ಟಿಳಕರನ್ನು ಬಂಧಿಸಿ, ನಾತು ಬಂಧುಗಳನ್ನು ಗಲ್ಲಿಗೇರಿಸುವ ದೃಶ್ಯ ನೋಡಿದ. ಈತ ಸ್ವಾತಂತ್ರ್ಯ ಸಾಧನೆಗಾಗಿ ಪ್ರಾಣಾರ್ಪಣೆ ಮಾಡಲು ದುರ್ಗಾದೇವಿಯ ಸಮ್ಮುಖದಲ್ಲಿ ಕಂಕಣಬದ್ಧನಾದ. ಭಾರತದ ಸ್ವಾತಂತ್ರ್ಯದ ಬಗ್ಗೆ ಮರಾಠಿ ಭಾಷೆಯಲ್ಲಿ ಲಾವಣಿಯೊಂದನ್ನು ರಚಿಸಿದ.

	ಈತ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಇತಿಹಾಸ, ರಾಜ್ಯಶಾಸ್ತ್ರದ ಅಭ್ಯಾಸಮಾಡಿ ಪದವಿ ಪಡೆದ(1900). ವಿದ್ಯಾರ್ಥಿ ದೆಸೆಯಲ್ಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತನಾಗಿದ್ದ. ಮಹಾರಾಷ್ಟ್ರದಲ್ಲಿ ಯುವಜನತೆಯನ್ನು ಒಗ್ಗೂಡಿಸುವ ಉದ್ದೇಶದಿಂದ ಅಭಿನವ ಭಾರತ ಎಂಬ ಸಂಘ ಸ್ಥಾಪಿಸಿದ. ಶ್ಯಾಮ್‍ಜೀ ಕೃಷ್ಣವರ್ಮ ಎಂಬವವರು ಇವನಿಗೆ ಶಿಷ್ಯವೇತನ ಕೊಟ್ಟು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಕಳಿಸಿಕೊಟ್ಟರು. ಇವನು ಅಲ್ಲಿಯೂ ತನ್ನ ಕ್ರಾಂತಿಕಾರಿ ವಿಚಾರಗಳನ್ನು ಭಾರತೀಯ ವಿದ್ಯಾರ್ಥಿಗಳಲ್ಲಿ ತುಂಬಿದ. ಒಂದು ಗುಪ್ತಸಂಸ್ಥೆಯನ್ನು ಕಟ್ಟಿದ. ಇವನಿಂದ ಸ್ಫೂರ್ತಿಗೊಂಡ ಭಾರತೀಯ ವಿದ್ಯಾರ್ಥಿಗಳು ಬಾಂಬ್ ತಯಾರಿಸುವುದನ್ನು ಕಲಿತರು. ಇದಕ್ಕಾಗಿ ಕೃಷ್ಣಶರ್ಮ ಇಂಗ್ಲೆಂಡಿನ ತನ್ನ ಮನೆ ಭಾರತಭವನವನ್ನು ಒಪ್ಪಿಸಿದ. ಅಲ್ಲಿ ಇವನು ಮತ್ತು ಇವನ ಸ್ನೇಹಿತರು ಬ್ರಿಟಿಷರನ್ನು ಭಾರತದಿಂದ ಹೊರದೂಡುವ ವಿಧಾನಗಳನ್ನು ಬೋಧಿಸುತ್ತಿದ್ದರು. ಇಷ್ಟೆಲ್ಲ ಚಟುವಟಿಕೆಗಳ ನಡುವೆಯೂ ಇವನು ಇಟಲಿಯ ಮುಖಂಡನಾದ ಜೋಸೆಫ್ ಮ್ಯಾಜಿನಿಯನ್ನು ಕುರಿತಂತೆ ಆತ್ಮವೃತ್ತ ಮತ್ತು ರಾಜಕಾರಣ ಎಂಬ ಗ್ರಂಥವನ್ನು ಮರಾಠಿ ಭಾಷೆಯಲ್ಲಿ ರಚಿಸಿದ. ಇದೊಂದು ಸಂಶೋಧನಾ ಗ್ರಂಥವಾಗಿದ್ದು ಇದರಿಂದ ಈತ ಪ್ರಪಂಚ ಖ್ಯಾತನಾದ. ಅನಂತರ ದಿ ಫಸ್ಟ್ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ಎಂಬ ಗ್ರಂಥವನ್ನು ಬರೆದ. ಇದರಲ್ಲಿ ಭಾರತದ 1857ರ ಪ್ರಥಮ ಸ್ವಾತಂತ್ರ್ಯ ದಂಗೆಯ ಬಗೆಗೆ ಹಾಗೂ ರಾಷ್ಟ್ರೀಯ ಜಾಗೃತಿಯ ಬಗೆಗೆ ಮಾರ್ಮಿಕ ವಿಚಾರಗಳಿವೆ. ಅಭಿನವ ಭಾರತದ ಚಟುವಟಿಕೆಗಳು ಬ್ರಿಟಿಷ್ ಆಡಳಿತದ ವಿರುದ್ಧ ಇದ್ದುದರಿಂದ ಅದರ ಸಂಚಾಲಕರನ್ನು ಬಂಧಿಸಲಾಯಿತು. ಇವನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಯುದ್ಧ ಹೂಡಿದನೆಂದು ಆರೋಪಿಸಿ ಗಡಿಪಾರಿನ ಶಿಕ್ಷೆ ವಿಧಿಸಲಾಯಿತು(1909). ಇವನಿಂದ ದೀಕ್ಷೆಪಡೆದ ಭಾರತೀಯ ಯುವಕರು ಗುಪ್ತವಾಗಿ ತಮ್ಮ ರಾಜಕೀಯ ಗುರಿಗಳನ್ನು ರೂಪಿಸುತ್ತಿದ್ದರು. ಭಾರತ ಸ್ವತಂತ್ರ್ಯವಾಗಬೇಕು, ಅದೊಂದು ಪ್ರಜಾ ಪ್ರಭುತ್ವರಾಷ್ಟ್ರವಾಗಬೇಕು, ಅದಕ್ಕೊಂದು ಭಾಷೆ ಇರಬೇಕು, ಅದು ಹಿಂದಿ ಭಾಷೆಯಾಗಿರಬೇಕು ಎಂಬ ನಿಲವು ಇವನದಾಗಿತ್ತು. ಇಂಥ ಉಗ್ರ ವಿಚಾರಗಳಿಂದ ಕೋಪಗೊಂಡ ಬ್ರಿಟಿಷ್ ಸರ್ಕಾರ ಇವನನ್ನು ಬಂಧಿಸಿತು. ಆಗ ಸ್ವಾತಂತ್ರ್ಯದಂತಹ ಪವಿತ್ರಕಾರ್ಯಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡುವ ಉದ್ಗಾರ ಮಾಡಿದ. ಬ್ರಿಟಿಷ್ ಸರ್ಕಾರ ಇವನನ್ನು ಭಾರತಕ್ಕೆ ಹಡಗಿನಲ್ಲಿ ಕರೆತರುವಾಗ ಅವರ ಕಣ್ಣುತಪ್ಪಿಸಿ ಸಮುದ್ರದಲ್ಲಿ ಈಜಿ ಫ್ರಾನ್ಸ್ ತಲುಪಿದ. ಫ್ರಾನ್ಸ್‍ನಲ್ಲಿ ತನಗೆ ರಕ್ಷಣೆ ಮತ್ತು ನೆರವು ದೊರೆಯಬಹುದೆಂದು ನಿರೀಕ್ಷಿಸಿದ್ದ. ಆದರೆ ಫ್ರಾನ್ಸ್ ಇವನಿಗೆ ರಕ್ಷಣೆ ಕೊಡಲಿಲ್ಲ, ಬದಲಾಗಿ ಇವನನ್ನು ಬ್ರಿಟಿಷರಿಗೆ ಒಪ್ಪಿಸಿತು. ಇವನನ್ನು ಭಾರತಕ್ಕೆ ಕರೆತಂದು ಇವನ ಮೇಲೆ ರಾಜಕೀಯ ಕೊಲೆ ಆಪಾದನೆ ಹೊರಿಸಿ ಅಂಡಮಾನ್‍ನಲ್ಲಿ ಇರಿಸಲಾಯಿತು. ಇವನು ಇಲ್ಲಿಯೂ ಜನರನ್ನು ಜಾಗೃತಗೊಳಿಸಿದ. ಅನಂತರ ಭಾರತಕ್ಕೆ ಬಂದಾಗ ಮಹಾತ್ಮಗಾಂಧೀಯವರು ಸ್ವಾತಂತ್ರ್ಯ ಚಳವಳಿ ನಾಯಕರಾಗಿದ್ದರು. ಆದರೆ ಗಾಂಧೀಜಿಯವರ ಮಾರ್ಗ ಹಾಗೂ ವಿಚಾರಧಾರೆಗಳು ಇವನಿಗೆ ಇಷ್ಟವಾಗಲಿಲ್ಲ. ಇವನು ಉಗ್ರ ಹೋರಾಟದ ಮೂಲಕ ಬ್ರಿಟಿಷರ ಆಡಳಿತ ಕೊನೆಗಾಣಿಸಲು ಮುಂದಾದ. ಹಿಂದು ಮಹಾಸಭೆಯ ಮುಖಂಡನಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ. ಹಿಂದುಗಳು ಉನ್ನತ ಶಿಕ್ಷಣ, ತರಬೇತಿ ಪಡೆದು ಉನ್ನತ ಹುದ್ದೆಗಳಲ್ಲಿರಬೇಕೆಂಬುದು ಇವನ ಇಚ್ಛೆಯಾಗಿತ್ತು. 
ಭಾರತದಲ್ಲಿರುವವರೆಲ್ಲರೂ ಹಿಂದುಗಳು, ಎಲ್ಲರೂ ಹಿಂದುಸ್ಥಾನದಲ್ಲಿ ನೆಲೆಸಿದ್ದಾರೆ, ಪ್ರತಿಯೊಬ್ಬ ಪ್ರಜೆಗೂ ಒಂದೇ ಮತ. ರಾಜಕಾರಣದಲ್ಲಿ ಜಾತೀಯತೆಯ ಹೆಸರನ್ನು ತರಕೂಡದು. ಸರ್ವರಿಗೂ ಸರಿಯಾದ ಸವಲತ್ತುಗಳನ್ನು ಕೊಡಬೇಕು. ಇವೇ ಮುಂತಾದ ವಿಚಾರಗಳನ್ನು ಪಕ್ಷದ ಮುಖಾಂತರ ಪ್ರಚಾರಗೊಳಿಸಿದ. ಇವನ ಹಲವು ವಿಚಾರಗಳು ರಾಷ್ಟ್ರೀಯ ಚಳವಳಿಗೆ  ಪೂರಕವಾದವು. ಕ್ರಾಂತಿಕಾರಿ ವಿಚಾರ ಹಾಗೂ ಕ್ರಿಯೆಗಳಿಂದಾಗಿ ವೀರ ಎಂಬ ಬಿರುದು ಈತನಿಗೆ ದೊರಕಿತು. ಈತ 83ನೆಯ ವಯಸ್ಸಿನಲ್ಲಿ 1966ರಲ್ಲಿ ನಿಧನ ಹೊಂದಿದ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
	   (ಎಸ್.ಎಮ್.ಎಚ್.)